ನಿರ್ವಾತ ರೇಚಕ -
ಕಡಿಮೆ ಒತ್ತಡದಲ್ಲಿರುವ ಆವರಣದಿಂದ ಅಧಿಕ ಒತ್ತಡದ ಆವರಣಕ್ಕೆ ಅನಿಲವನ್ನು ವರ್ಗಾಯಿಸುವ ಸಾಧನ (ವ್ಯಾಕ್ಯೂಮ್ ಪಂಪ್). ಸಾಂದ್ರಕದೊಡನೆ (ಕಂಡೆನ್ಸರ್) ರೇಚಕವನ್ನು ಉಪಯೋಗಿಸುವುದು ಸಾಮಾನ್ಯ. ಆಗ ಇದನ್ನು ಸಾಂದ್ರಕದ ಕೆಳಗಡೆ ಸಾಧ್ಯವಾಗುವಷ್ಟು ಹತ್ತಿರ ಸ್ಥಾಪಿಸಬೇಕು. ಸಾಂದ್ರಕ ಮತ್ತು ರೇಚಕದ ನಡುವಿನ ಸಂಪರ್ಕ ಬಾಗುಗಳಿಲ್ಲದೆ ನೇರವಾಗಿರಬೇಕು. ಇಲ್ಲಿ ಮುಖ್ಯಾಂಶವೊಂದನ್ನು ಗಮನಿಸಬೇಕು. ನಿರ್ವಾತದ ನಿರ್ಮಾಣ ರೇಚಕದ ಮುಖ್ಯ ಕೆಲಸವಲ್ಲ; ಆವಿಯ ಸಾಂದ್ರೀಕರಣದಿಂದಲೇ ನಿರ್ವಾತ ಏರ್ಪಡುತ್ತದೆ. ಆದರೆ ಕಾಲಕ್ರಮೇಣ ವಾಯುವಿನ ಸೋರುವಿಕೆಯಿಂದ ಇದು ಕೆಡುವ ಸಂಭವ ಉಂಟು; ಇದನ್ನು ತಪ್ಪಿಸಿ ನಿರ್ವಾತವನ್ನು ಕಾಪಾಡುವುದು ರೇಚಕದ ಮುಖ್ಯ ಕೆಲಸ.

ರೇಚಕಗಳಲ್ಲಿ ಮುಖ್ಯವಾಗಿ ವಾಯುಸ್ಥಿತ್ಯಾತ್ಮಕ (ಏರೊಸ್ಟ್ಯಾಟಿಕ್) ಮತ್ತು ವಾಯುಗತ್ಯಾತ್ಮಕ (ಏರೊಡೈನಮಿಕ್) ಎಂಬ ಎರಡು ವಿಧಗಳಿವೆ.

ವಾಯುಸ್ಥಿತ್ಯಾತ್ಮಕ ಬಗೆಯದರಲ್ಲಿ ಅನಿಲ ವರ್ಗಾವಣೆಯ ಬಲಗಳೂ ಯಾವುದೇ ಕಣದಲ್ಲಿ ನಿಶ್ಚಲ ಸಮತೋಲನವನ್ನು ಕಾಯ್ದುಕೊಂಡಿರುವುವು. ಇಂಥ ರೇಚಕದಲ್ಲಿ ಒತ್ತಡ ವ್ಯಾಪ್ತಿ ಕಾರ್ಯಾಚರಣೆಯ ಜವವನ್ನು ಅವಲಂಬಿಸುವುದಿಲ್ಲ. ತೇವದ ರೇಚಕ, ಶುಷ್ಕರೇಚಕ ಮುಂತಾದವು ಈ ಬಗೆಯವು.

ವಾಯುಗತ್ಯಾತ್ಮಕ ಬಗೆಯದರಲ್ಲಿ ಅನಿಲದ ಮೇಲಿನ ಬಲಗಳೂ ಗತ್ಯಾತ್ಮಕವಾಗಿರುತ್ತವೆ. ರೇಚಕ ಭಾಗಗಳು ಚಲಿಸಿದಂತೆ ಅವು ಬದಲಾಗುವುವು; ಕಾರ್ಯಾಚರಣೆಯ ಜವ ಬಲು ಕಡಿಮೆ ಆದಾಗ ಕಣ್ಮರೆ ಆಗುವುವು. ಈ ರೀತಿಗೆ ಉದಾಹರಣೆ ಉತ್ಪಾಟಕ (ಇಜೆಕ್ಟರ್), ಅಪಕೇಂದ್ರಕ ರೇಚಕ ಮುಂತಾದವು.
(ಕೆ.ಆರ್.ಎಂ.ಒ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ